ದಶರಥನಿಂದ ಸುಮಿತ್ರೆಯಲ್ಲಿ ಜನಿಸಿದ ಅವಳಿ ಮಕ್ಕಳಲ್ಲಿ ಹಿರಿಯವ. ಶತ್ರುಘ್ನ ಇವನ ತಮ್ಮ. ರಾಮ ಹುಟ್ಟಿದ ಮೂರನೆಯ ದಿನ ಈತ ಹುಟ್ಟಿದ. ದಶರಥನ ಹಿರಿಯ ಹೆಂಡತಿ ಕೌಸಲ್ಯೆಯ ಮಗ ರಾಮ ಈತನ ಅಣ್ಣ. ದಶರಥನ ಕಿರಿಯ ಹೆಂಡತಿ ಕೈಕೇಯಿಯ ಮಗ ಭರತ ಇವನ ತಮ್ಮ. ಲಕ್ಷ್ಮಣ, ಅಣ್ಣನಾದ ರಾಮನನ್ನು ಸದಾ ಅನುಸರಿಸುತ್ತಿದ್ದ. ರಾಮ-ಲಕ್ಷ್ಮಣರು ಬಾಲ್ಯಾವಸ್ಥೆ ದಾಟುತ್ತಿರುವಾಗಲೇ ವಿಶ್ವಾಮಿತ್ರ ದಶರಥನಲ್ಲಿಗೆ ಬಂದು ತನ್ನ ಯಜ್ಞ ರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ಕಳುಹಿಸಲು ಒಪ್ಪಿಸಿ, ಅವರಿಬ್ಬರನ್ನು ಕರೆದುಕೊಂಡು ಹೋದ. ಕಾಡಿನಲ್ಲಿ ಋಷಿಯ ಯಜ್ಞವನ್ನು ರಕ್ಷಿಸುತ್ತಿರುವ ವೇಳೆಯಲ್ಲಿ ಮಾರೀಚ, ಸುಬಾಹು ಎಂಬ ರಕ್ಕಸರು ಅಡ್ಡಿಪಡಿಸಿದಾಗ, ರಾಮ ಲಕ್ಷ್ಮಣರು ಸುಬಾಹುವನ್ನು ಕೊಂದು, ಮಾರೀಚನನ್ನು ತಮ್ಮ ಬಾಣಗಳಿಂದ ಬಹುದೂರದವರೆಗೆ ಹಾರಿಸಿಬಿಟ್ಟರು. ಯಜ್ಞ ಸಾಂಗವಾಗಿ ನೆರವೇರಿತು. ಸುಪ್ರೀತನಾದ ವಿಶ್ವಾಮಿತ್ರ ಇವರಿಬ್ಬರನ್ನು ಮಿಥಿಲಾನಗರಿಗೆ ಕರೆದೊಯ್ದು ಸೀತಾಸ್ವಯಂವರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ. ಅಲ್ಲಿ, ರಾಮ ಶಿವಧನುಸ್ಸನ್ನು ಮುರಿದು ಸೀತಾದೇವಿಯನ್ನು ವರಿಸಿದ. ಸೀರಧ್ವಜ ಜನಕನ ಪುತ್ರಿ ಊರ್ಮಿಳೆ ಲಕ್ಷ್ಮಣನನ್ನು ವಿವಾಹವಾದಳು. 

ರಾಮ, ಸೀತೆಯೊಡನೆ ಹದಿನಾಲ್ಕು ವರ್ಷಗಳು ವನವಾಸಕ್ಕೆ ಹೋಗಲು ಸಿದ್ಧನಾದಾಗ ಅವರನ್ನು ಹಿಂಬಾಲಿಸಿ ತನ್ನ ಭ್ರಾತೃತ್ವವನ್ನು ಮೆರೆದ. ಆ ವೇಳೆಯಲ್ಲಿ ಭರತ, ಶತ್ರುಘ್ನರು ಸೋದರಮಾವನ ಮನೆಯಲ್ಲಿದ್ದರು. ಅಯೋಧ್ಯೆಗೆ ಹಿಂದಿರುಗಿದ ಅವರು ನಡೆದ ವೃತ್ತಾಂತವನ್ನೆಲ್ಲ ತಿಳಿದು, ರಾಮಲಕ್ಷ್ಮಣ ಸೀತೆಯರನ್ನು ಪುನಃ ಅಯೋಧ್ಯೆಗೆ ಕರೆತರುವ ಯತ್ನಮಾಡಲು ಕಾಡಿಗೆ ಬಂದಾಗ ಭರತನ ಪರಿವಾರದವರನ್ನು ದೂರದಿಂದಲೇ ಕಂಡ ಲಕ್ಷ್ಮಣ, ತಮ್ಮನ್ನು ಕೊಲ್ಲಲು ಇವರು ಬಂದಿದ್ದಾರೆಂದು ತಪ್ಪಾಗಿ ಗ್ರಹಿಸಿ ಭರತನನ್ನು ಸಂಹರಿಸಲು ಯೋಚಿಸಿದ. ರಾಮ ಇವನನ್ನು ತಡೆದು ಸಮಾಧಾನಪಡಿಸಿದ. 

ರಾವಣನ ತಂಗಿ ಶೂರ್ಪಣಖಿ ರಾಮನನ್ನು ಮೋಹಿಸಿ ಬಂದಾಗ ಅವಳ ಮನೋಭಿ-ಲಾಷೆಯನ್ನು ಗಮನಿಸಿ ಅವಳನ್ನು ತಮ್ಮನ ಬಳಿಗೆ ಕಳುಹಿಸಿದ. ಲಕ್ಷ್ಮಣ ಅವಳ ಮೂಗು, ಕಿವಿಗಳನ್ನು ಕೊಯ್ದು ದೂಡಿದ. ಮಾರೀಚ ಮಾಯಾಜಿಂಕೆಯಾಗಿ ಸೀತೆಯ ಕಣ್ಣಿಗೆ ಗೋಚರಿಸಿ ಆಕೆಯನ್ನು ಆಕರ್ಷಿಸಿದ. ಆಕೆಯ ಇಷ್ಟವನ್ನು ನೆರವೇರಿಸಲು ರಾಮ ಅದರ ಬೆನ್ನಟ್ಟಿದ.  ಆ ಜಿಂಕೆ ರಾಮನನ್ನು ಕಾಡಿನೊಳಕ್ಕೆ ಬಹುದೂರ ಸೆಳೆಯಿತು. ಕೊನೆಗೆ ಅವನ ಬಾಣಕ್ಕೆ ತುತ್ತಾಗಿ ‘ಹಾ ಲಕ್ಷ್ಮಣಾ’ ಎಂದು ಅರಚುತ್ತಾ ಸತ್ತಿತ್ತು. ಸೀತೆ ಆ ದನಿಯನ್ನು ಕೇಳಿ ಗಾಬರಿಯಾಗಿ ರಾಮನಿಗೇನೋ ಆಪತ್ತಾದಂತಿದೆ, ಹೋಗಿ ನೋಡೆಂದು ಲಕ್ಷ್ಮಣನನ್ನು ಆಗ್ರಹಪಡಿಸಿದಳು. ಲಕ್ಷ್ಮಣ ಒಲ್ಲದ ಮನಸ್ಸಿನಿಂದ ಸೀತೆಯೊಬ್ಬಳನ್ನು ಬಿಟ್ಟು ತೆರಳಿದ. ಹೊಂಚುಹಾಕಿ ಕಾಯುತ್ತಿದ್ದ ರಾವಣ ಸೀತೆಯನ್ನು ಅಪಹರಿಸಿದ. ಹಿಂತಿರುಗಿ ಬಂದ ರಾಮಲಕ್ಷ್ಮಣರು ಸೀತೆಯನ್ನು ಕಾಣದೆ ಪರಿತಪಿಸಿದರು. ಅಣ್ಣನನ್ನು ಲಕ್ಷ್ಮಣ ಸಮಾಧಾನಪಡಿಸಿ ಸೀತಾನ್ವೇಷಣಕಾರ್ಯದಲ್ಲಿ ನಿರತನಾದ.  ಕಾಡಿನಲ್ಲಿ ಅಲೆಯುತ್ತಿದ್ದಾಗ ಸುಗ್ರೀವನ ದೂತನಾದ ಹನುಮಂತ ರಾಮಲಕ್ಷ್ಮಣರನ್ನು ಸಂಧಿಸಿ ಸುಗ್ರೀವನ ಗೆಳೆತನ ಗಳಿಸಿಕೊಟ್ಟ. ಅನಂತರ ರಾಮ ವಾಲಿಯನ್ನು ಕೊಂದು ಸುಗ್ರೀವನಿಗೆ ರಾಜ್ಯವನ್ನು ದೊರಕಿಸಿದ. ವಾನರರು ಸೀತೆಯನ್ನು ಹುಡುಕುವ ಕಾರ್ಯ ಕೈಗೆತ್ತಿಕೊಂಡಾಗ ಹನುಮಂತ ಸಮುದ್ರ ಲಂಘನ ಮಾಡಿ ಸೀತೆ ಲಂಕೆಯಲ್ಲಿರುವ ಸುದ್ಧಿಯನ್ನು ತಂದ. ಸೀತೆಯನ್ನು ಹಿಂದಿರುಗಿಸಲು ರಾವಣ ನಿರಾಕರಿಸಿದ ಕಾರಣ ರಾಮ, ವಾನರ ಸೈನ್ಯದೊಂದಿಗೆ ಲಂಕೆಯನ್ನು ಮುತ್ತಿದ. ರಾಮ ರಾವಣರ ಯುದ್ಧದಲ್ಲಿ ಲಕ್ಷ್ಮಣನದು ಮುಖ್ಯಪಾತ್ರ. ಯುದ್ಧ ನಡೆದಾಗ ಪರಾಕ್ರಮಿಯಾದ ಅತಿಕಾಯನನ್ನು ಬ್ರಹ್ಮಾಸ್ತ್ರದಿಂದಲೂ ರಾವಣನ ಮಗ ಇಂದ್ರಜಿತುವನ್ನು ಐಂದ್ರಾಸ್ತ್ರದಿಂದಲೂ ಕೊಂದ. ಇಂದ್ರಜಿತುವಿನೊಡನೆ ಹೋರಾಡುತ್ತ ಲಕ್ಷ್ಮಣ ಮೂರ್ಛೆ ಹೋದಾಗ ಹನುಮಂತ ಸಂಜೀವಿನಿ ಪರ್ವತವನ್ನು ತಂದು ಇವನನ್ನು ಉಳಿಸಿದ. ಕೊನೆಗೆ ರಾಮನ ಪಕ್ಷಕ್ಕೇ ಜಯ ದೊರಕಿತು. ಅನಂತರ ರಾಮಲಕ್ಷ್ಮಣ ಸೀತೆಯರು ಅಯೋಧ್ಯೆಗೆ ಹಿಂದಿರುಗಿದರು. 

ರಾಮ ಅಯೋಧ್ಯಾಧಿಪತಿಯಾದ ಮೇಲೆ ಲಕ್ಷ್ಮಣನನ್ನು ಯುವರಾಜನ ನ್ನಾಗಿಸಬೇಕೆಂಬ ಬಯಕೆಗೆ ಲಕ್ಷ್ಮಣ ಅಸಮ್ಮತಿಸಿದ. ಆ ಪದವಿಯನ್ನು ಭರತನಿಗೆ ಬಿಟ್ಟುಕೊಟ್ಟು ತಾನು ‘ರಾಮದಾಸ’ ನಾಗಿಯೇ ಉಳಿಯಲು ನಿಶ್ಚಯಿಸಿದ.

ಜನಾಪವಾದಕ್ಕೆ ಹೆದರಿದ ರಾಮ ಸೀತೆಯನ್ನು ಪರಿತ್ಯಜಿಸಲು ನಿರ್ಧರಿಸಿ, ಅವಳನ್ನು ಗಂಗಾ ನದಿಯ ತೀರದ ಬಳಿ ಬಿಟ್ಟುಬರಲು ಲಕ್ಷ್ಮಣನನ್ನು ನಿಯೋಜಿಸಿದ. ಅಣ್ಣನ ಮಾತನ್ನು ಮೀರಲಾರದೆ ಅತೀವ ದುಃಖದಿಂದಲೇ  ಆ ಕಾರ್ಯ ನಿರ್ವಹಿಸಿದ. ಒಮ್ಮೆ ರಾಮ ತನ್ನ ಅಂತಃಪುರದಲ್ಲಿ ರಹಸ್ಯವಾಗಿ ತಾಪಸನೊಡನೆ ಸಂಭಾಷಿಸುತ್ತಿರುವಾಗ ದೂರ್ವಾಸಮುನಿಯ ಆಜ್ಞೆಯ ಪ್ರಕಾರ ಆ ಸ್ಥಳವನ್ನು ಪ್ರವೇಶಿಸಿ ಅಣ್ಣನ ಅವಕೃಪೆಗೆ ಕಾರಣನಾದ. ರಹಸ್ಯ ಸಮಾಲೋಚನೆಯಲ್ಲಿದ್ದಾಗ ಯಾರಾದರೂ ಅತಿಕ್ರಮಿಸಿದರೆ ಅಂಥವನು ವಧಾರ್ಹ ಎಂಬ ನಿಯಮ ಪಾಲನೆಯಲ್ಲಿತ್ತು. ಆದರೆ ರಾಮ ತನ್ನ ತಮ್ಮ ಲಕ್ಷ್ಮಣನನ್ನು ವಧೆಗೀಡು ಮಾಡದೆ ತ್ಯಜಿಸಿದ. ಲಕ್ಷ್ಮಣ ಕಡೆಯದಾಗಿ ಸರಯೂ ನದೀತೀರದ ಬಳಿ ಧ್ಯಾನಯೋಗದಲ್ಲಿ ಸಮಾಧಿಸ್ತನಾದ.

ಲಕ್ಷ್ಮಣ, ರಾಮನಿಗೆ ಅಶ್ವಮೇಧಯಾಗ ಮಾಡಲು ಹೇಳಿದ್ದು; ಅಶ್ವಮೇಧದ ತುರಗ ರಕ್ಷಣೆಗಾಗಿ ತಾನೇ ಹೊರಟದ್ದು; ಲಕ್ಷ್ಮಣ ತನ್ನ ಮಕ್ಕಳಾದ ಅಂಗದ, ಚಂದ್ರಕೇತು ಅವರನ್ನು ತಾರಾಪಥ ಹಾಗೂ ಚಂದ್ರಕಾಂತ ಪುರಿಗಳಲ್ಲಿ ನೆಲಸುವಂತೆ ಸೂಚಿಸಲು ರಾಮನಿಗೆ ಹೇಳಿದ್ದು ಮೊದಲಾದ ವೃತ್ತಾಂತಗಳು ಉತ್ತರ ರಾಮಾಯಣದಿಂದ ತಿಳಿದು ಬರುತ್ತವೆ.
ಲಕ್ಷ್ಮಣನ ಭ್ರಾತೃ ವಾತ್ಸಲ್ಯ ಅದ್ವಿತೀಯವಾದದ್ದು. ತಾಯಿ, ತಂದೆ, ಪತ್ನಿಗಿಂತಲೂ ಹಿರಿಯಣ್ಣ ರಾಮನ ಮೇಲೆ ಇವನಿಗೆ ಅಪಾರ ಶ್ರದ್ಧಾಭಕ್ತಿ. ಹಾಗಾಗಿ ಎಲ್ಲವನ್ನೂ ತ್ಯಜಿಸಿ, ತನಗೆ ಅನಿವಾರ್ಯವಲ್ಲದಾದರೂ ರಾಮ-ಸೀತೆಯರೊಡನೆ ಕಾಡಿಗೆ ತೆರಳಿ ಹದಿನಾಲ್ಕು ವರ್ಷ ಅಲ್ಲಿ ಅವರ ರಕ್ಷಣೆಗಾಗಿ ತನ್ನನ್ನು ಮುಡಿಪಾಗಿಟ್ಟುಕೊಂಡ. ಅಣ್ಣನಿಗಾಗಿ ತನ್ನ ಪ್ರಾಣವನ್ನರ್ಪಿಸಲು ಹಿಂದೆಗೆಯಲಿಲ್ಲ. ಭಾರತೀಯ ಪರಂಪರೆಯಲ್ಲಿ ಭ್ರಾತೃನಿಷ್ಠೆಗೆ ಲಕ್ಷ್ಮಣ ಹೆಸರಾಗಿದ್ದಾನೆ.
	                        
(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ